ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಚಿರನಹಳ್ಳಿಯಲ್ಲಿ ತೋಟದ ಕಾವಲುಗಾರ ಲಕ್ಷ್ಮಣ್ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕುಡಿದ ಮತ್ತಿನಲ್ಲಿ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿದ್ದು, ಬೆಂಗಳೂರಿಗೆ ಪರಾರಿಯಾಗಿದ್ದ ಆರೋಪಿ ನವೀನ್ನನ್ನು ಬಂಧಿಸಲಾಗಿದೆ. ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಘಟನೆಯಿಂದ ಸುತ್ತಮುತ್ತಲಿನ ತೋಟದ ಮಾಲೀಕರು ಹಾಗೂ ಕೃಷಿಕರಲ್ಲಿ ಆತಂಕ ಮೂಡಿತ್ತು. ಚಿಕ್ಕಮಗಳೂರು, ನವೆಂಬರ್ 12: ತೋಟದ ಕಾವಲುಗಾರನನ್ನು ನಿರ್ಮಾಣ ಹಂತದ ಮನೆಯೊಳಗೆ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣವನ್ನು ಕಡೂರು ಪೊಲೀಸರು ಕೊನೆಗೂ ಭೇದಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಚಿರನಹಳ್ಳಿ ಸಮೀಪದ ಅಡಿಕೆ ತೋಟದ ಮನೆಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಎಂಬಾತನನ್ನು ಬಂಧಿಸಲಾಗಿದೆ.