ಸಾಮಾನ್ಯವಾಗಿ ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಒಳ್ಳೆಯ ಗಳಿಕೆ ಮಾಡುವುದು ಬಹಳ ಕಡಿಮೆ. ಉತ್ತರದಲ್ಲಿ ಬ್ಲಾಕ್ ಬಸ್ಟರ್ ಆದ ಸಿನಿಮಾಗಳು ಸಹ ದಕ್ಷಿಣ ಭಾರತದಲ್ಲಿ ಫ್ಲಾಪ್ ಆದ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲೂ ತಮಿಳುನಾಡು, ಕೇರಳಗಳ್ಳಂತೂ ಬಾಲಿವುಡ್ ಸಿನಿಮಾಗಳಿಗೆ ಮಾರುಕಟ್ಟೆ ಅತ್ಯಂತ ಕಡಿಮೆ. ಆದರೆ ‘ರಾಮಾಯಣ’ ಸಿನಿಮಾಕ್ಕೆ ಈ ರಾಜ್ಯಗಳಲ್ಲಿಯೂ ಸಹ ಒಳ್ಳೆಯ ಪ್ರತಿಕ್ರಿಯೆ ದೊರಕುತ್ತಿದೆ. ‘ರಾಮಾಯಣ’ ಸಿನಿಮಾ ಭಾರತದಾದ್ಯಂತ ಅದ್ಭುತ ಗಳಿಕೆ ಮಾಡುತ್ತಿದೆ. ಮೊದಲ ದಿನ ನಿರೀಕ್ಷಿಸಿದಷ್ಟು ಕಲೆಕ್ಷನ್ ಆಗಲಿಲ್ಲವಾದರೂ ಆ ನಂತರದ ದಿನಗಳಲ್ಲಿ ಜನ ಚಿತ್ರಮಂದಿರಕ್ಕೆ ಮುಗಿಬೀಳುತ್ತಿದ್ದಾರೆ. ಬಿಡುಗಡೆ ಆದ ಐದೇ ದಿನದಲ್ಲಿ ಹಲವು ದಾಖಲೆಗಳನ್ನು ‘ರಾಮಾಯಣ’ ಸಿನಿಮಾ ಮುರಿದಿದ್ದು, ಹಲವಾರು ಕಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.