ಶೋಪಿಯಾನ್ ಪೊಲೀಸರು ಉಗ್ರರ ಹಣಕಾಸು ಜಾಲ ಭೇದಿಸಿ 10 ಮಂದಿಯನ್ನು ಬಂಧಿಸಿದ್ದಾರೆ. ಡಿಜಿಟಲ್ ಪಾವತಿ ಮೂಲಕ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಹಣ ಹಾಗೂ ಸ್ಮಾರ್ಟ್ಫೋನ್ ಪೂರೈಕೆ ಮಾಡಲಾಗುತ್ತಿತ್ತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂತಹ ಜಾಲಗಳ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದು, ಉಗ್ರರ ಆಸ್ತಿ ವಶಪಡಿಸಿಕೊಂಡು, ಯುಎಪಿಎ ಕಾಯ್ದೆಯಡಿ ಕ್ರಮ ಜರುಗಿಸುತ್ತಿದ್ದಾರೆ. ಶ್ರೀನಗರ, ಅಕ್ಟೋಬರ್ 30: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿದ್ದ ಶಂಕಿತ ಜಾಲವೊಂದನ್ನು ಶೋಪಿಯಾನ್ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಲಾಗಿದೆ. ವಿಶೇಷವೆಂದರೆ, ಜೈಲಿನಲ್ಲಿರುವ ಭಯೋತ್ಪಾದಕರು ಮತ್ತು ಅವರ ಸಹಚರರ ಸಂಪರ್ಕದ ಮೂಲಕ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು ಎಂಬ ಅನುಮಾನ ಪೊಲೀಸರಿಗಿದೆ.