ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯ ಭವ್ಯ ಶ್ರೀರಾಮ ಜನ್ಮಭೂಮಿ ಮಂದಿರವು ಮನಮೋಹಕ ಹಾಗೂ ವೈವಿಧ್ಯಮಯ ವರ್ಣರಂಜಿತ ವಿದ್ಯುತ್ ದೀಪಗಳಿಂದ ನವವಧುವಿನಂತೆ ಕಂಗೊಳಿಸುತ್ತಿದೆ. ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀರಾಮನ ಭವ್ಯ ಮಂದಿರವನ್ನು ನೋಡಲು ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತಾದಿಗಳು ಅಯೋಧ್ಯೆಗೆ ಬರುತ್ತಿದ್ದಾರೆ. ರಾಮ ಮಂದಿರದ ಪ್ರಧಾನ ಗೋಪುರ, ಮಂಟಪಗಳು ಹಾಗೂ ಸಂಪೂರ್ಣ ಆವರಣವನ್ನು ದೇಶ ವಿದೇಶಗಳಿಂದ ತರಿಸಲಾದ ವಿಶೇಷ ಸುಗಂಧಿತ ಹೂವುಗಳು ಮತ್ತು ಅತ್ಯಾಧುನಿಕ 'ಎಲ್ಇಡಿ' ದೀಪಗಳಿಂದ ಸಿಂಗರಿಸಲಾಗಿದೆ.