ಯಾದಗಿರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬುಧವಾರ ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ. ಬೆಳಗ್ಗೆ 9ಕ್ಕೆ ಆರಂಭವಾಗಬೇಕಾದ ಕಾರ್ಯಕ್ರಮ 12ಗಂಟೆಯಾದರೂ ಶುರುವಾಗಿರಲಿಲ್ಲ. ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ವಿವಿಧ ನೂರಾರು ಕಲಾವಿದರು ಬರಬೇಕಿತ್ತು. ಯಾವ, ಯಾವ ಸ್ಪರ್ಧೆಗಳು ಇರಬೇಕು, ಯಾರ್ಯಾರನ್ನು ಕರೆಯಿಸಬೇಕು, ನಿಗದಿತ ಅವಧಿಗೆ ಶುರು ಮಾಡಿ ಅಚ್ಚುಕಟ್ಟಾಗಿ ಆಯೋಜನೆ ಮಾಡುವ ಮೂಲಕ ನೈಜ ಕಲಾವಿದರಿಗೆ ಉತ್ತಮ ವೇದಿಕೆ ಆಗಬೇಕಾಗಿದ್ದ ಜಿಲ್ಲಾಮಟ್ಟದ ಯುವ ಜನೋತ್ಸವ ಸಂಪೂರ್ಣ ಕಳಪೆಮಟ್ಟದ್ದಾಗಿತ್ತು.ಕಲಾವಿದರು ಇಲ್ಲ, ಆಯೋಜಕರು ಇಲ್ಲ, ಇಡೀ ಸಭಾಂಗಣವೇ ಖಾಲಿ ಇತ್ತು. ನೋಡುಗರು ಅವರೇ ಕಲೆ ಪ್ರದರ್ಶನ ಮಾಡುವವರು ಅವರೇ ಎಂಬಂತೆ ಐವತ್ತು ಮಂದಿ ಮಾತ್ರ ಅಲ್ಲಿದ್ದರು.