ಕೋಲಾರ ಜಿಲ್ಲೆಯಲ್ಲಿ ರೈತರು ಮತ್ತು ಅರಣ್ಯ ಇಲಾಖೆ ನಡುವೆ ಭೂ ಸಂಘರ್ಷ ತಾರಕಕ್ಕೇರಿದೆ. ಶ್ರೀನಿವಾಸಪುರದಲ್ಲಿ ಅರಣ್ಯ ಒತ್ತುವರಿ ತೆರವು ವೇಳೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಯಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ರಕ್ಷಣೆ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ. ರೈತರು ಜಂಟಿ ಸಮೀಕ್ಷೆಗೆ ಆಗ್ರಹಿಸಿದ್ದಾರೆ. ಕೋಲಾರ, ಅಕ್ಟೋಬರ್ 28: ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ರೈತರು ಹಾಗೂ ಅರಣ್ಯ ಇಲಾಖೆ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಹೀಗಿರುವಾಗ ಇಂದು ಇಬ್ಬರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತುವರಿದಾರರು ಹಾಗೂ ಕೆಲ ರೈತರು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.